kannada

January 24, 2008

ರಾಗಿ ಮುದ್ದೆ

Filed under: ತಿಂಡಿ ತಿನಿಸು (Recipe) — kannada @ 11:27 pm


ಹೀಗೆ ಸುಮಾರು ದಿನಗಳಾಗಿ ಹೋದವು ಇಲ್ಲಿ ಪೋಸ್ಟ್ ಮಾಡಿ. ಕೊನೇ ಪಕ್ಷ ರಾಗಿ ಮುದ್ದೆ ಬಗ್ಗೆ ಆದ್ರೂ ಬರೆದು ಹಾಕೋಣವೆಂದರೆ ಆಗದೆ ಹೋಗಿದೆ. ಇತ್ತೀಚೆಗೆ ಇಲ್ಲಿ ನೋಡಿದಾಗ, ನಾನು ಈ ತಿನಿಸಿನ ಬಗ್ಗೆ ಬರೆದಿರುವ ನೆನಪು ಬಂದಿತ್ತು. ಸೀರಿಯಸ್ಲಿ, ಚೆನ್ನಾಗಿ ಗುರುತು ಬಂದಿತ್ತು, ತದನಂತರ ಸ್ವಲ್ಪ ನನ್ನಲ್ಲೇ ವಿಚಾರ ಮಾಡಿದಾಗ ಹೊಳೆಯಿತು, ನಾನು ಸುಮಾರು ಪ್ರತೀದಿವಸ ಮನಸ್ಸಿನಲ್ಲಿ ನೆನಪಿಸಿಕೊಂಡಿರುತಿದ್ದೇನೆಯೇ ಹೊರತು, ಅಕ್ಷರಗಳು ಇಲ್ಲಿಯಂತೂ ಬಂದಿರಲಿಲ್ಲ.
ಬ್ಯಾಕ್ ಟು ಟಾಪಿಕ್:
ರಾಗಿ ಮುದ್ದೆ ಮಾಡಲು ಬೇಕಾಗುವ ಸಾಮಗ್ರಿಗಳು:
      ರಾಗಿ ಹಿಟ್ಟು – ೧ ಕಪ್
      ನೀರು  – ೧.೫ ಕಪ್  (೧ – ೧.೫ ಹಿಟ್ಟು-ನೀರು ಅಳತೆ)
      ಹಿಂಗು – ಒಂದು ಚಿಟುಕು (ನಾನು ಎಂದೂ ಇದನ್ನ ಹಾಕಿದ್ದನ್ನ ನೋಡಿರಲಿಲ್ಲ, ಹಾಗಾಗಿ ನನ್ನದೇ ಆದ ಫ಼್ಲೇವರ್‌ಗಾಗಿ ಟ್ರೈ ಮಾಡಿದೆ)
      ಜೀರಿಗೆ – ಒಂದು ಚಮಚ ( ಇದೂ ಸಹ)
      ದಪ್ಪ ತಳವಿರುವ ಪಾತ್ರೆ
      ಮರದ ಕೋಲು
      ಸ್ಟೋವ್,
      ಇಕ್ಕಳ ಅಥವ ಬಟ್ಟೆ ( ಬಿಸಿ ಪಾತ್ರೆಯನ್ನು ಹಿಡಿದಿಟ್ಟುಕೊಳ್ಳುವುದಕ್ಕೆ ಬೇಕಾದರೆ)

 ragimuddhe_b1.jpg  ragimuddhe_b2.jpg


ಮಾಡುವ ವಿಧಾನ:
      ಅ. ಪಾತ್ರೆಯಲ್ಲಿ ೧.೫ ಕಪ್ ಅಳತೆ ನೀರು ಹಾಕಿ ಒಲೆಯ ಮೇಲೆ ಇಡುವುದು (make sure to light the stove)
      ಆ. ನೀರು ಬಿಸಿಯಾಗುತ್ತಿದ್ದಂತೆ ತೆಗೆದಿಟ್ಟುಕೊಂಡಿರುವ ಹಿಂಗು, ಜೀರಿಗೆ ಎರಡನ್ನೂ ಹಾಕುವುದು
      ಇ. ನೀರು ಕುದಿಯಲು ಬರವ ಹೊತ್ತಿಗೆ, ಹಿಟ್ಟು ಹಾಗು ಕೋಲು ಹತ್ತಿರವಿಟ್ಟುಕೊಂಡಿರುವುದು.
      ಈ. ನೀರು ಕುದಿ ಬಂದ ಮೇಲೆ ಸ್ಟೋವ್ ಕಾವು ಕಡಿಮೆ ಮಾಡುವುದು.
      ಉ. ಹಿಟ್ಟನ್ನ ಕುದಿಯುತ್ತಿರುವ ನೀರಿಗೆ ಹಾಕಿ
      ಊ. ಕೂಡಲೇ ಒಂದು ಕೈಯಲ್ಲಿ ಪಾತ್ರೆ ಹಿಡಿದು, ಇನ್ನೊಂದು ಕೈಯಲ್ಲಿ ಕೋಲಿನಿಂದ ಹಿಟ್ಟನ್ನು ರಭಸವಾಗಿ ಕಲಿಸುವುದು. ಈ ಒಂದು ಹಂತ ಬಹು ಬೇಗ ಮಾಡಬೇಕು. ವಿಳಂಬವಾದರೆ, ಹಿಟ್ಟು ಗಂಟು ಕಟ್ಟುವ ಸಾಧ್ಯತೆ ಇದೆ. ಪಾತ್ರೆಯಲ್ಲಿ ಎಲ್ಲೂ ಬರೆ ಹಿಟ್ಟು ಕಾಣದ ಹಾಗೆ ಕಲಿಸಬೇಕು.
      ಋ. ಹಾಗೆ ಕಲಿಸಿದ ನಂತರ, ಅದೇ ಕಡಿಮೆ ಫ಼್ಲೇಮ್‌ ಮೇಲೆ, ಎರಡರಿಂದ ಮೂರು ನಿಮಿಷ ಹಾಗೇ ಇಡುವುದು.

ಉಂಡೆ ಮಾಡುವ ವಿಧಾನ:
      ಅ. ಒಂದು ತಟ್ಟೆ, ಒಂದು ಕಪ್ ತಣ್ಣೀರು ತೆಗೆದಿಟ್ಟುಕೊಳ್ಳುವುದು
      ಆ. ಮೇಲೆ ಬೆಂದ ಹಿಟ್ಟನ್ನು ತಟ್ಟೆಗೆ ಪೂರ್ತಿ ಅಥವ ಸ್ವಲ್ಪ ಬೊಗಸಿಕೊಳ್ಳುವುದು
      ಇ. ಕೈಯನ್ನು ತಣ್ಣನೆ ನೀರಿನಲ್ಲಿ ಒಮ್ಮೆ ಅದ್ದಿಕೊಂಡು, ತಟ್ಟೆಯಲ್ಲಿ ಬೊಗಸಿಟ್ಟುಕೊಂಡಿರುವ ಹಿಟ್ಟನ್ನು (ಎಷ್ಟು ದೊಡ್ಡದಾಗಿ ಬೇಕೋ ಅಷ್ಟು) ಉಂಡೆ ಮಾಡುವುದು.

ತಿನ್ನುವ ವಿಧಾನ:
      ತಿನ್ನುವ ವಿಧಾನವೆಂದರೇನು? ಹೌದು, ಇದನ್ನ ತಿನ್ನುವ ವಿಧಾನ ಬೇರೆ ಇದೆ. ಇದನ್ನ ಬರೀದಾಗಿ ತಿನ್ನಲು ಕಷ್ಟ. ಇದಕ್ಕೆ ಹುಳಿ, ಸಾರು, ಗೊಜ್ಜು, ಮೊಸರು ಇಂತಹ ಯಾವುದಾದರೊಂದು ಇದ್ದರೆ ತಿನ್ನಲು ಚೆನ್ನ. ಉಂಡೆ ಮಾಡಿದ ನಂತರ, ಇದನ್ನು ತಣ್ಣಗಾಗುವ ಮುಂಚೆ ತಿನ್ನಬೇಕು. ಹಾಗಾಗಿ ಇದನ್ನ ಊಟಕ್ಕೆ ಕುಳಿತುಕೋಳ್ಳುವ ೫ ನಿಮಿಷ ಮುಂಚೆ ಮಾಡಲು ಶುರು ಮಾಡಿದರೆ ಉತ್ತಮ. ತಣ್ನಗಾದ ನಂತರ ಇದನ್ನ ಮತ್ತೆ microwaveನಲ್ಲಿ ಇಟ್ಟು ತಿನ್ನಲು ಆಗುವುದಿಲ್ಲ.
      ಅ. ತಟ್ಟೆಗೆ ಸಾರು/ಹುಳಿ ಹಾಕಿಕೊಂಡು, ಮೇಲೆ ಮಾಡಿರುವ ಮುದ್ದೆಯನ್ನ ಹಾಕಿಕೊಳ್ಳುವುದು
      ಆ. ಮುದೆಯ ಮೇಲೆ ಎಷ್ಟು ಬೇಕೋ ಅಷ್ಟು ತುಪ್ಪ ಹಾಕಿಕೊಂಡರೆ, ಸವಿಯಲು ಮಜಾ ಇರತ್ತೆ.
      ಇ. ಕೈಯಲ್ಲಿ ಸ್ವಲ್ಪ ಹಿಟ್ಟು ಮುರಿದು, ಸಾರಿನಲ್ಲಿ ಅದ್ದಿ (ಸವರಿ/ಮುಳುಗಿಸಿ), ಬಾಯಲ್ಲಿ ಹಾಕಿಕೊಂಡು, “ನುಂಗಿಬಿಡಬೇಕು”. ಕೆಲವರು, ಬಹುಶಃ ಮಕ್ಕಳು ಇದನ್ನ ಅಗೆದು ತಿನ್ನುತ್ತಾರೆ. ಇದು ಹಾಗೆ ಹಲ್ಲಿನಲ್ಲಿ ಮೆತ್ತಿಕೊಳ್ಳುವುದರಿಂದ, ನುಂಗಿದರೆ ಒಳ್ಳೆಯದು.

ರಾಗಿ ಮುದ್ದೆ ಉಪಯೋಗ:
      ಅ. ಇದು ಸಾಕಷ್ಟು ಪ್ರೋಟೀನ್ ಹಾಗು ಕಡಿಮೆ ಕಾರ್ಬೋಹೈಡ್ರೇಟ್ಸ್ ಕೊಡುವುದರಿಂದ, ದೇಹಕ್ಕೆ ಒಳ್ಳೆಯದು
      ಆ. ಇದು ನಿಧಾನವಾಗಿ ಜೇರ್ಣವಾಗುವುದರಿಂದ, ಎನರ್ಜಿ ಸ್ವಲ್ಪ ಸ್ವಲ್ಪವಾಗಿ ರೆಲೀಸ್ ಮಾಡಿ ಹೆಚ್ಚು ಹೊತ್ತು ತಾಕತ್ತು ಕೊಡುತ್ತದೆ
      ಇ. ಸುಮಾರು ೧೫ ನಿಮಿಷದಲ್ಲಿ ಸಾರು ಮುದ್ದೆ ರೆಡಿಯಾಗುತ್ತೆ, ಅದರಲ್ಲೂ, ಸಂಜೆ ಮನೆಗೆ ಬಂದು ಅಡುಗೆ ಮಾಡಲು ಚತನ್ಯವಿರದಿದ್ದರೆ, ಇದು ಒಂದು ಸುಗಮ ದಾರಿ 🙂

ನಾನು ಸಾಮಾನ್ಯವಾಗಿ ಬೆಳಿಗ್ಗೆ ಆಫ಼ೀಸಿಗೆ ಹೊರಡುವ ಮುಂಚೆ ತಿಂದು ಹೊರಡುತ್ತೇನೆ. ಕೆಲವು ಸಲ ಸಂಜೆ ಊಟದ ಜೊತೆ ನಾವು ಇದನ್ನ ಮಾಡಿರುತ್ತೇವೆ.

December 18, 2007

ತಿಂಡಿ ತಿನಿಸು – ರೆಸಿಪಿ? (Recipe)

Filed under: ತಿಂಡಿ ತಿನಿಸು (Recipe) — kannada @ 12:26 am

ಈ ಬ್ಲಾಗ್-ನಲ್ಲಿ ತಿಂಡಿ ತಿನಿಸುಗಳ ಬಗ್ಗೆ ಅಷ್ಟಾಗಿ ಬರೆದಿರಲಿಲ್ಲ. ಇತ್ತೀಚೆಗೆ ಕೆಲವು ತಿನಿಸುಗಳನ್ನ ಇಲ್ಲಿ ಕೆಲವರಲ್ಲಿ ಶೇರ್ ಮಾಡಬೇಕೆಂದಿನಿಸಿತು. ಕೊನೆ ಪಕ್ಷ ಬೇರೆ ಏನೂ ಬರೆಯಲು ತೋಚದಿದ್ದರೂ, ದಿನ ನಿತ್ಯ ತಿನ್ನುವ ತಿನಿಸುಗಳ ಬಗೆಗಾದರೂ ಇಲ್ಲಿ ಬರೆಯುವ ಸಾಹಸ ಮಾಡಬೇಕೆನಿಸಿದೆ. ಇತೀಚೆಗೆ ವೈದ್ಯರು ನನಗೆ ಲೊ-ಸೋಡಿಯಮ್ ಅಂಥ ಬೇರೆ ಹೇಳಿ ಈಗ ಆಂತಹ ಕೆಲವು ರೆಸಿಪಿಗಳನ್ನ ನಾವು ಮನೆಯಲ್ಲಿ ಸುಮಾರು ಪ್ರಯತ್ನ ಮಾಡುತ್ತಿರುವುದು ಮತ್ತೊಂದು ಇನ್ಸ್ಪಿರೇಷನ್ ನನಗೆ ಎಂದು ಹೇಳಿದರೂ ಆಶ್ಚರ್ಯವಲ್ಲ. ಹೀಗೆ ನನ್ನ ಪಟ್ಟಿಯಲ್ಲಿರುವ ಮೊದಲನೇ ತಿನಿಸು – ರಾಗಿ ಮುದ್ದೆ. 
                                                                                   (…ಸಶೇಷ)

May 22, 2006

ಸೌತೇಕಾಯಿ ಸೂಪ್

Filed under: ತಿಂಡಿ ತಿನಿಸು (Recipe) — kannada @ 6:44 am

ಸೌತೇಕಾಯಿ ಸೂಪ್

ಇಂದು ಸಂಜೆ ನಮ್ಮ ಊಟದ ನಂತರ ನಾವು ಬೆರೆ ಏನಾದರು ಹೊಸ ತಿಂಡಿ ಟ್ರೈ ಮಾಡಬೇಕೆಂದು ಕೊಂಡು ಇದೊಂದನ್ನ ಪ್ರಯತ್ನಿಸಿದೆವು – ಸೌತೇಕಾಯಿ ಸೂಪ್

ಸಾಮಗ್ರಿಗಳು:

  • ಸೌತೇಕಾಯಿ – 1
  • ಮೊಸರು – 1 ಕಪ್
  • ಸಣ್ಣ (ಸಾಂಬಾರ್) ಈರುಳ್ಳಿ – 2
  • ಉಪ್ಪು – ರುಚಿಗೆ ತಕ್ಕಷ್ಟು
  • ಮೆಣಸು ಪುಡಿ – 1/2 tsp

(more…)

Blog at WordPress.com.